11.14.2010

ಮಧುಮೇಹ ಪೀಡಿತ ಮಕ್ಕಳಿಗೆ ಉಚಿತ ಗ್ಲುಕೋಮೀಟರ್ ವಿತರಣೆ


ಬೆಂಗಳೂರಿನಲ್ಲಿ ಭಾನುವಾರ "ವಿಶ್ವ ಮಧುಮೇಹ ದಿನಾಚರಣೆ" ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಮಧುಮೇಹಿಗಳಿಗಾಗಿನ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಬಿಬಿಎಂಪಿ ಉಪ ಆಯುಕ್ತ ಮುಜಿಬುಲ್ಲಾ ಜಫಾರಿ, ಮೈಕ್ರೋ ಲ್ಯಾಬ್ಸ್ ವ್ಯವಸ್ಥಾಪಕ ನಿರ್ದೇಶಕ ದಿಲೀಪ್ ಸುರಾನಾ, ಹಿರಿಯ ಮಧುಮೇಹ ತಜ್ಞ ಡಾ.ಸಿ.ಮುನಿಚೂಡಪ್ಪ ಹಾಗೂ "ಬಿಡಿಎಚ್"ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಕೆ.ಎಂ.ಪ್ರಸನ್ನಕುಮಾರ್ ಅವರು ಹಾಜರಿದ್ದರು.


"ವಿಶ್ವ ಮಧುಮೇಹ ದಿನಾಚರಣೆ" ಅಂಗವಾಗಿ ಬೆಂಗಳೂರು ಡಯಾಬಿಟಿಸ್ ಆಸ್ಪತ್ರೆ ಆಯೋಜಿಸಿದ್ದ ಉಚಿತ ಮಧುಮೇಹ ಪರೀಕ್ಷೆಯನ್ನು ಬೆಂಗಳೂರಿನಲ್ಲಿ ಭಾನುವಾರ ನಡೆಸಲಾಯಿತು. ಈ ಸಂದರ್ಭದಲ್ಲಿ (ಎಡದಿಂದ ಬಲಕ್ಕೆ) "ಬಿ.ಬ್ರಾನ್" ಚಾನಲ್ ಸೇಲ್ಸ್ ಎಕ್ಸಿಕಿಟ್ಯೂವ್ ನರೇಶ ವಿ., ಖ್ಯಾತ ಮಧುಮೇಹ ತಜ್ಞ ಡಾ. ಜಿ.ಬಾಲಚಂದ್ರ ಹಾಗೂ ಬೆನಕ ಸೈಂಟಿಫಿಕ್ಸ್ ಸಂಸ್ಥೆಯ ವಿ.ಬಿ.ಮುರಳೀಧರ್ ಅವರು ಉಪಸ್ಥಿತರಿದ್ದರು.

* * * * * * * * * * *

ಬೆಂಗಳೂರು: ಮಧುಮೇಹ ಪೀಡಿತರ ಸಂಕಷ್ಟಕ್ಕೆ ಸ್ಪಂದಿಸುತ್ತಾ ಬಂದಿರುವ ಬೆಂಗಳೂರು ಡಯಾಬಿಟಿಸ್ ಆಸ್ಪತ್ರೆ (ಬಿಡಿಎಚ್) ಮತ್ತೊಂದು ಮಹತ್ವದ ಹೆಜ್ಜೆಯಿಟ್ಟು "ವಿಶ್ವ ಮಧುಮೇಹ ದಿನಾಚರಣೆ" ಸಂದರ್ಭದಲ್ಲಿ ಮಧುಮೇಹ ಪೀಡಿತ ಬಡ ಮಕ್ಕಳಿಗೆ ಉಚಿತವಾಗಿ ಗ್ಲುಕೋಮೀಟರ್ ವಿತರಣೆ ಮಾಡಿತು.

ಭಾನುವಾರ ನಡೆದ ಸಮಾರಂಭದಲ್ಲಿ ಮಕ್ಕಳಿಗೆ ಗ್ಲುಕೋಮಿಟರ್ ಮಾತ್ರವಲ್ಲ ಇನ್ಸುಲೀನ್ ಹಾಗೂ ಸ್ಕೂಲ್ ಬ್ಯಾಗ್ ಗಳನ್ನು ಕೂಡ ನೀಡುವ ಮೂಲಕ ಮಕ್ಕಳ ದಿನಾಚರಣೆ ಹಾಗೂ ವಿಶ್ವ ಮಧುಮೇಹ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಮಕ್ಕಳಲ್ಲಿ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸಲು ಚಿತ್ರ ಬರೆಯುವ ಸ್ಪರ್ಧೆಯನ್ನು ಕೂಡ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಖ್ಯಾತ ಮಧುಮೇಹ ತಜ್ಞ ಡಾ. ಜಿ.ಬಾಲಚಂದ್ರ ಅವರು "ಇಂದು ಮಕ್ಕಳ ದಿನಾಚರಣೆ; ಪುಟಾಣಿಗಳಿಗೆ ಸಿಹಿ ಹಂಚಿ ಸಂಭ್ರಮಿಸಬೇಕು. ಆದರೆ ಕೆಲವು ಮಕ್ಕಳು ಮಧುಮೇಹದಿಂದ ಬಳಲುತ್ತಿದ್ದಾರೆ. ಅಂಥವರಿಗೆ ನಾವು ಸಿಹಿ ತಿನ್ನುವುದನ್ನು ನಿಯಂತ್ರಿಸಿ ಎಂದು ಹೇಳಬೇಕಾದ ಪರಿಸ್ಥಿತಿ. ವಿಶ್ವ ಮಧುಮೇಹ ದಿನಾಚರಣೆ ಸಂದರ್ಭದಲ್ಲಿ ಇಂಥದೊಂದು ಸಂದೇಶವನ್ನು ನೀಡುವುದು ಅನಿವಾರ್ಯವೂ ಆಗಿದೆ" ಎಂದು ಹೇಳಿದರು.

"ಮಕ್ಕಳಿಗೆ ಆರೋಗ್ಯಕಾರಿ ಹಾಗೂ ಪೋಷಕಾಂಶ ಇರುವ ಆಹಾರ ಅಗತ್ಯವಾಗಿದೆ. ಬೆಳೆಯುವ ವಯಸ್ಸಿನಲ್ಲಿ ಪುಟಾಣಿಗಳು ತಿನ್ನುವ ಪದಾರ್ಥಗಳಲ್ಲಿ ಪೋಷಕಾಂಶದ ಕೊರತೆಯಿದೆ. ಫಾಸ್ಟ್ ಫುಡ್ ಗಳಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ" ಎಂದ ಅವರು "ತಂಪು ಪಾನೀಯಗಳು, ಮತ್ತೆ ಮತ್ತೆ ಬಳಸಿದ ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಅತಿಯಾಗಿ ಸಿಹಿ ತಿನ್ನುವುದರಿಂದ ಅನೇಕ ತೊಂದರೆಗಳು ಎದುರಾಗುತ್ತವೆ" ಎಂದರು.

"ಹೆಚ್ಚಿನ ದೈಹಿಕ ಚಟುವಟಿಕೆ ಇಲ್ಲದೆಯೇ, ಮಕ್ಕಳು ಕೂಡ ಅಧಿಕ ಸಮಯ ಟೆಲಿವಿಷನ್ ಮುಂದೆ ಕಾಲ ಕಳೆಯುವುದು ಕೂಡ ಅಪಾಯಕಾರಿ" ಎಂದು ಡಾ.ಜಿ.ಬಾಲಚಂದ್ರ ಹೇಳಿದರು.

ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಸ್.ವಿ.ರಂಗನಾಥ್, ಬಿ.ಬಿ.ಎಂ.ಪಿ. ಉಪ ಆಯುಕ್ತರಾದ ಮುಜಿಬುಲ್ಲಾ ಜಫಾರಿ, ಮೈಕ್ರೋ ಲ್ಯಾಬ್ಸ್ ವ್ಯವಸ್ಥಾಪಕ ನಿರ್ದೇಶಕ ದಿಲೀಪ್ ಸುರಾನಾ, ಹಿರಿಯ ಮಧುಮೇಹ ತಜ್ಞ ಡಾ.ಸಿ.ಮುನಿಚೂಡಪ್ಪ ಹಾಗೂ "ಬಿಡಿಎಚ್"ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಕೆ.ಎಂ.ಪ್ರಸನ್ನಕುಮಾರ್, ಡಾ.ಕಾಶಿನಾಥ್ ದೀಕ್ಷಿತ್, "ಬಿ.ಬ್ರಾನ್" ಚಾನಲ್ ಸೇಲ್ಸ್ ಎಕ್ಸಿಕಿಟ್ಯೂವ್ ನರೇಶ ವಿ., ಬೆನಕ ಸೈಂಟಿಫಿಕ್ಸ್ ಸಂಸ್ಥೆಯ ವಿ.ಬಿ.ಮುರಳೀಧರ್ ಅವರು ಪಾಲ್ಗೊಂಡಿದ್ದರು.