3.29.2010

ಹುಲಿ ರಕ್ಷಣೆಗೆ ಧ್ವನಿ ಎತ್ತಿದ "ಯಾಮಿನಿ"



ಬೆಂಗಳೂರು: "ಹುಲಿ ರಕ್ಷಣೆ ನಮ್ಮೆಲ್ಲರ ಹೊಣೆ" ಸಂದೇಶವನ್ನು ಪ್ರತಿಯೊಬ್ಬರಿಗೂ ಮುಟ್ಟಿಸುವ ಪ್ರಯತ್ನದಲ್ಲಿ "ಜಿ.ಎನ್.ಎಸ್." ಯಾಮಿನಿ ಫೌಂಡೇಷನ್ ತೊಡಗಿದೆ.

ಫೌಂಡೇಷನ್ ಕಾರ್ಯದರ್ಶಿಯೂ ಆಗಿರುವ ಕಿರುತೆರೆ ನಟಿ ಶೋಭಾ ಎಂ.ಲೋಲನಾಥ್ ಅವರು ಹುಲಿ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿಯೊಬ್ಬರೂ ಹೇಗೆ ತಮ್ಮದೇ ಆದ ರೀತಿಯಲ್ಲಿ ಪ್ರಯತ್ನ ಮಾಡಬಹುದು ಎನ್ನುವುದನ್ನು ಮನವರಿಕೆ ಮಾಡಿಕೊಡಲು ಮುಂದಾಗಿದ್ದಾರೆ.

ಇದೇ ಜಾಗೃತಿ ಆಂದೋಲನದ ಅಂಗವಾಗಿ ಹುಲಿ ರಕ್ಷಣೆಯ ಕುರಿತ ಸಂದೇಶಗಳನ್ನು ಹೊತ್ತ "ಸ್ಟೀಕರ್" ಹಂಚುವ ಕಾರ್ಯಕ್ರಮವನ್ನೂ ಶೋಭಾ ಅವರು ಸೋಮವಾರ ಉದ್ಯಾನನಗರಿಯಲ್ಲಿ ಆರಂಭಿಸಿದರು. ಅಷ್ಟೇ ಅಲ್ಲ ರಾಷ್ಟ್ರೀಯ ಪ್ರಾಣಿಯಾದ ಹುಲಿಯ ಚರ್ಮ ಹಾಗೂ ಉಗುರು ಕೊಳ್ಳಬಾರದು; ಇವುಗಳನ್ನು ಮಾರುವವರು ಕಾಣಿಸಿಕೊಂಡರೆ ಪೊಲೀಸರಿಗೆ ಮಾಹಿತಿ ನೀಡುವ ಅಗತ್ಯದ ಕುರಿತೂ ತಿಳುವಳಿಕೆ ನೀಡುವ ಕಾರ್ಯವನ್ನೂ ಫೌಂಡೇಷನ್ ಸದಸ್ಯರು ಆರಂಭಿಸಿದರು.

"2001-02ರಲ್ಲಿ 3,642 ರಷ್ಟು ಇದ್ದ ಹುಲಿಗಳ ಸಂಖ್ಯೆಯು ಈಗ ಅಂದಾಜು 1,411ಕ್ಕೆ ಕುಸಿದಿದೆ. ಇದೇ ಆತಂಕಕ್ಕೆ ಕಾರಣ. ಹುಲಿ ಚರ್ಮ ಹಾಗೂ ಉಗುರು ಕೊಳ್ಳುವಲ್ಲಿ ಹಲವರಿಗೆ ಆಸಕ್ತಿ ಇರುವ ಕಾರಣ ಇಂಥದೊಂದು ಅಪಾಯ ಎದುರಾಗಿದೆ. ಆದ್ದರಿಂದ ಕೊಳ್ಳುವ ಆಸಕ್ತಿಯೇ ಇಲ್ಲವಾಗಬೇಕು, ಆಗ ಹುಲಿಯನ್ನು ಕೊಲ್ಲುವವರೂ ಇಲ್ಲವಾಗುತ್ತಾರೆ" ಎಂದು ಶೋಭಾ ಅವರು ಹೇಳಿದ್ದಾರೆ.

ಹುಲಿ ರಕ್ಷಣೆ ಜಾಗೃತಿ ಆಂದೋಲನದ ಮುಂದಿನ ಹೆಜ್ಜೆಯಾಗಿ "ಜಿ.ಎನ್.ಎಸ್." ಯಾಮಿನಿ ಫೌಂಡೇಷನ್ ವಿವಿಧ ಕಲಾವಿದರನ್ನು ಒಗ್ಗೂಡಿಸಿ ನೃತ್ಯ ರೂಪಕವನ್ನು ಪ್ರದರ್ಶಿಸಲಿದೆ. ಈ ನೃತ್ಯ ರೂಪಕ ಪ್ರದರ್ಶನವನ್ನು ರಾಜ್ಯದ ವಿವಿಧ ನಗರಗಳಲ್ಲಿ ಆಯೋಜಿಸಲಾಗುವುದೆಂದು ಶೋಭಾ ತಿಳಿಸಿದ್ದಾರೆ.