5.06.2010

ಎಚ್.ವೈ.ಎಸ್.ಎ. ಖಂಡನೆ


ಪತ್ರಿಕಾ ಸ್ವಾತಂತ್ರ್ಯಕ್ಕೆ ಭಂಗ ತರುವಂಥ ಕ್ರಮವನ್ನು ಕೈಗೊಂಡಿರುವ ಶಿವಮೊಗ್ಗ ಪೊಲೀಸರ ಕ್ರಮವನ್ನು ಖಂಡಿಸಿ ಹೊಯ್ಸಳ ಯೂತ್ಸ್ ಸ್ಪೋರ್ಟ್ಸ್ ಅಸೋಸಿಯೇಷನ್ (ಎಚ್.ವೈ.ಎಸ್.ಎ.) ಯುವಕರು ಹಾಗೂ ಇಸ್ರೋ ಲೇಔಟ್ ಮತ್ತು ಕುಮಾರಸ್ವಾಮಿ ಬಡಾವಣೆಯ ನಾಗರಿಕರು ಗುರುವಾರ ಬೆಂಗಳೂರಿನಲ್ಲಿ ಪ್ರದರ್ಶನ ಫಲಕಗಳನ್ನು ಹಿಡಿದು ಮೌನ ಪ್ರತಿಭಟನೆ ನಡೆಸಿದರು


ಸುದ್ದಿ ಮೂಲ ಬಹಿರಂಗಕ್ಕೆ ಪೊಲೀಸರ ಒತ್ತಾಯ:
ಎಚ್.ವೈ.ಎಸ್.ಎ. ಖಂಡನೆ

ಸುದ್ದಿ ಮೂಲವನ್ನು ಬಹಿರಂಗಪಡಿಸಬೇಕೆಂದು ಶಿವಮೊಗ್ಗ ಪೊಲೀಸರು "ಪ್ರಜಾವಾಣಿ" ಪತ್ರಿಕೆಯ ಸಹ ಸಂಪಾದಕರಾದ ಪದ್ಮರಾಜ ದಂಡಾವತಿ ಮತ್ತು ವರದಿಗಾರ ರಾಹುಲ್ ಬೆಳಗಲಿ ಅವರಿಗೆ ನೋಟಿಸ್ ನೀಡಿರುವುದನ್ನು ಖಂಡಿಸಿರುವ ಹೊಯ್ಸಳ ಯೂತ್ಸ್ ಸ್ಪೋರ್ಟ್ಸ್ ಅಸೋಸಿಯೇಷನ್ (ಎಚ್.ವೈ.ಎಸ್.ಎ.) ಯುವಕರು ಗುರುವಾರ ಬೆಂಗಳೂರಿನಲ್ಲಿ ಮೌನ ಪ್ರತಿಭಟನೆ ನಡೆಸಿದರು.

ಪತ್ರಕರ್ತರಿಗೆ ನೋಟಿಸ್ ನೀಡಿರುವ ಪೊಲೀಸರು ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿರುವುದನ್ನು ಎಚ್.ವೈ.ಎಸ್.ಎ. ಯುವಕರು ಖಂಡಿಸಿದ್ದು, ಇಸ್ರೋ ಲೇಔಟ್ ಹಾಗೂ ಕುಮಾರಸ್ವಾಮಿ ಲೇಔಟ್ ನಾಗರಿಕರೊಂದಿಗೆ ಸೇರಿ ಪ್ರದರ್ಶನ ಫಲಕಗಳನ್ನು ಹಿಡಿದು "ಪತ್ರಿಕಾ ಸ್ವಾತಂತ್ರ್ಯವನ್ನು ಕಾಪಾಡಬೇಕು" ಎಂದು ಆಗ್ರಹಿಸಿದರು.

ನೈಜವಾದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಡುತ್ತಿರುವ ಪತ್ರಕರ್ತರ ವಿರುದ್ಧ ಇಂಥ ಕ್ರಮವನ್ನು ಕೈಗೊಂಡಿರುವುದು ಆಕ್ಷೇಪಾರ್ಹವೆಂದು ಈ ಭಾಗದ ನಾಗರಿಕರು ಧ್ವನಿ ಎತ್ತಿದ್ದಾರೆ.

"ಸುದ್ದಿ ಮೂಲವನ್ನು ರಹಸ್ಯವಾಗಿಡುವುದು ಪತ್ರಿಕಾ ಧರ್ಮಗಳಲ್ಲಿ ಒಂದಾಗಿದೆ. ಎಲ್ಲ ಪತ್ರಕರ್ತರೂ ಇದನ್ನು ಪಾಲಿಸಲೇಬೇಕು. ಇದಕ್ಕೆ ವಿರುದ್ಧವಾಗಿ ಸುದ್ದಿ ಮೂಲವನ್ನು ತಿಳಿಸುವಂತೆ ಪೊಲೀಸರು ನೋಟಿಸ್ ನೀಡುವ ಮೂಲಕ ಒತ್ತಡ ಹೇರಿರುವುದು ಸರಿಯಲ್ಲ" ಎಂದು ಕೂಡ ಎಚ್.ವೈ.ಎಸ್.ಎ. ಯುವಕರು ಅಭಿಪ್ರಾಯಪಟ್ಟಿದ್ದಾರೆ.

ಎಚ್.ವೈ.ಎಸ್.ಎ. ಪ್ರಧಾನ ಕಾರ್ಯದರ್ಶಿ ಕಿರಣ್ ಆಳ್ವಾ ವಿ. ಅವರ ನೇತೃತ್ವದಲ್ಲಿ ನಡೆದ ಮೌನ ಪ್ರತಿಭಟನೆಯಲ್ಲಿ ಇಸ್ರೋ ಲೇಔಟ್ ಹಾಗೂ ಕುಮಾರಸ್ವಾಮಿ ಬಡಾವಣೆಯ ನಾಗರಿಕರು ಪಾಲ್ಗೊಂಡರು.