10.03.2009

`ಮಿತಾ' ನೃತ್ಯೋತ್ಸಾಹ ಅಪರಿಮಿತ

`ಮಿತಾ' ನೃತ್ಯೋತ್ಸಾಹ ಅಪರಿಮಿತ

ಭಾವನೆಗಳಿಗೆ ಮನ ನೀಡಿದ ಪದಗಳೆಲ್ಲ ಸೇರಿ ಆಯಿತು ಭಾವಗೀತೆ; ಆ ಗೀತೆಯ ಲಯಕೆ ನಲಿಯಿತು ನವಿಲು. ಅದನು ಕಂಡ ಕಂಗಳ ಅಂಗಳದಲ್ಲಿ ಹರ್ಷ ವರ್ಷ! ಎದೆಯೊಳಗೆ ಕೂಡ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದಂತಹ ಗಿಲಗಿಲ ನಾದ-ನಿನಾದ. ಆಗ ಆದ ಆನಂದವನ್ನು ಅಕ್ಷರಗಳ ಜೋಡಿಸಿಟ್ಟು ವರ್ಣಿಸಲು ಸಾಧ್ಯವೆ? ಖಂಡಿತ ಆಗದು! ಅಂತಹದೊಂದು ಅವ್ಯಕ್ತ ಹಿತಾನುಭವ ನೀಡಿದ್ದು ಮಿತಾ ರಮೇಶ್ ಅವರ ಕಥಕ್ ರಂಗ ಪ್ರವೇಶ ಕಾರ್ಯಕ್ರಮ.
ತಾಳ ಹಾಗೂ ಲಯದ ಮೇಲೆ ಬಿಗುವಿನ ಹಿಡಿತ ಸಾಧಿಸಿದ ಈ ಯುವ ನರ್ತಕಿ ತೋರಿದ ಭಾವ ಶುದ್ಧತೆಯನ್ನು ಕಂಡ ಖ್ಯಾತ ಕಲಾ ವಿಮರ್ಶಕ ಡಾ.ಎಂ.ಸೂರ್ಯಪ್ರಸಾದ್ ಕೂಡ ಹಾಡಿ ಹೊಗಳಿದ್ದು ಅಚ್ಚರಿಯೇನಲ್ಲ. ಕಥಕ್ ನೃತ್ಯ ಪ್ರಕಾರವು ಕೇವಲ ತಾಳಕ್ಕೆ ಹೆಜ್ಜೆ ಕೂಡಿಸುವ ಕಲೆಯಲ್ಲ; ಭಾವಗಳು ಕೂಡ ಅಲ್ಲಿ ಉಕ್ಕಿ ಹರಿಯಬೇಕು. ಅದೇ ನಿಜವಾದ ಕಥಕ್ ಕಲಾ ಕೌಶಲ್ಯ. ಅಂತಹ ಭಾವ ಸ್ಪಷ್ಟತೆಯನ್ನು ಮಿತಾ ರಂಗದ ಮೇಲೆ ಪ್ರದರ್ಶಿಸಿದರು.
ನೃತ್ಯ ಗುರುಗಳಾದ ನಂದಿನಿ ಕೆ.ಮೆಹ್ತಾ ಹಾಗೂ ಕೆ.ಮುರಳಿ ಮೋಹನ್ ಮಾರ್ಗದರ್ಶನದಲ್ಲಿ ಭಾವ-ಭಂಗಿ, ರಾಗ-ತಾಳ ಹಾಗೂ ಲಯಗಳ ಜ್ಞಾನ ಪಡೆದಿರುವ ಮಿತಾ ಅವರ ನೃತ್ಯೋತ್ಸಾಹ ನೋಡಿದವರಿಗೆ ಅದೊಂದು ಉತ್ಸವದಂತೆ ಗೋಚರಿಸಿತು. ರಂಗ ಪ್ರವೇಶ ನೃತ್ಯ ಸೊಬಗು ಹೆಚ್ಚಿಸಲು ಸಜ್ಜಾಗಿದ್ದ ವೇದಿಕೆ ಕೂಡ ಅಂತಹದೇ ಹಬ್ಬದ ಸಡಗರವನ್ನು ಕಂಗಳ ಮುಂದೆ ತೆರೆದಿಟ್ಟಿದ್ದು ವಿಶೇಷ.

ಕಲಿತ ಕಲಾ ಕೌಶಲ್ಯವನ್ನು ರಂಗದ ಮೇಲೆ ಪ್ರದರ್ಶಿಸುವ ಅಂಗವಾದ ರಂಗ ಪ್ರವೇಶದ ಈ ಸಂಪ್ರದಾಯದ ಚೌಕಟ್ಟಿನೊಳಗೆ ಎಲ್ಲವನ್ನೂ ಚೊಕ್ಕಟವಾಗಿ ಜೋಡಿಸಿಟ್ಟಿದ್ದು ಮಾತ್ರ ಮಿತಾ. ತಾಳಗಳ ಜೊತೆಗೆ ಹೆಜ್ಜೆಗೂಡಿಸಿದರು. ಅಷ್ಟೇ ಅಲ್ಲ; ರಾಗದ ಲಯದೊಂದಿಗೆ ಲಾಲಿತ್ಯಪೂರ್ಣವಾಗಿ ಅಂಗ ಚಲನೆಯ ರಂಗವಲ್ಲಿಯನ್ನೂ ಬಿಡಿಸಿದರು ಲಲಿತಾ ಹಾಗೂ ಟಿ.ಎನ್. ರಮೇಶ್ ಅವರ ಪುತ್ರಿಯಾದ ಮಿತಾ.

ಶಾಸ್ತ್ರದಂತೆ ಸರಸ್ವತಿ ವಂದನೆಯೊಂದಿಗೆ ತೆರೆಯಿತು ಕಥಕ್ ರಂಗ ಮಂಚದ ತೆರೆ. `ವಿಹರತಿ ಭ್ರಹ್ಮ ನಂದಿನಿ...' ಹಾಡಿನ ಭಾವಗಳ ನಾಡಿ ಹಿಡಿದ ನೃತ್ಯಗಾರ್ತಿಯ ಹಸ್ತ ಮುದ್ರೆಗಳ ಶುದ್ಧಿಯಂತೂ ಎದ್ದು ಕಾಣಿಸಿತು. ಅದೇ ಪ್ರೇಕ್ಷಕರಿಗೆ ಪ್ರಿಯವೂ ಎನಿಸಿದ್ದು ಸಹಜ. ಇಲ್ಲಿ ನೃತ್ಯ ಮಾಡಿದ ಯುವ ಕಲಾವಿದೆಗೆ ಸಮನ್ವಿತಾ ಶರ್ಮ ಅವರ ಗಾಯನವೇ ಸ್ಫೂರ್ತಿಯ ಸೆಲೆ. ಪ್ರಭಾವಿ ಗಾನವೇ ನೃತ್ಯ ಪ್ರದರ್ಶನದ ಅರ್ಧ ಯಶಸ್ಸು; ಇನ್ನರ್ಧ ಪಾಲು ಮಿತಾ ನೃತ್ಯ ಪರಿಣತಿಯದ್ದು.

`ತೀನ್ ತಾಲ್' ಅಂತೂ ಮನದ ಮನೆಯಲ್ಲಿ ಗಟ್ಟಿಯಾಗಿ ಉಳಿಯಿತು. ತಾಳ-ಲಯದೊಂದಿಗೆ ಒಂದಾಗಿ ಅಂದ ಹೆಚ್ಚಿಸುವುದು ಹೇಗೆಂದು ಸಾಕ್ಷಿ ನೀಡಿದರು ಮಿತಾ. ಕಾಫಿ-ಖಮಾಜ್ ರಾಗ ಬೆರಕೆಯಿಂದ ಪಂಡಿತ್ ದತ್ತಾತ್ರೇಯ ಗರುಡ ಅವರು ಸಂಯೋಜಿಸಿದ `ಶಾಮ್ ಚುನರಿಯಾ ದೇದೆ ಮೋರಿ...' ಠುಮರಿಯಲ್ಲಿ ಸ್ಫುರಣಗೊಂಡ ಬಹುಭಾವಗಳ ಪ್ರವಾಹದ ನಡುವೆಯೂ ಭಕ್ತಿರಸ ಉಕ್ಕಿ ಹರಿಯಿತು. `ಮಾರಾ ರಾಮ್ ತಮೆ ಸೀತಾ ಜೀ ನೆ ತೋಲೆನ ಆವ್...' ಭಜನ್ ಕೂಡ ಭಕ್ತಿಯ ವಿಭಿನ್ನ ಅಭಿವ್ಯಕ್ತಿ ಎನಿಸಿತು.

ಧಮಾರ್ ಹಾಗೂ ಯಮನ್ ಕಲ್ಯಾಣ್ ರಾಗದ ತರಾನಾ ಪ್ರಸ್ತುತ ಪಡಿಸುವುದರೊಂದಿಗೆ ರಂಗ ಪ್ರವೇಶ ಕಾರ್ಯಕ್ರಮಕ್ಕೆ ತೆರೆ ಎಳೆದ ಮಿತಾಗೆ ವಾದ್ಯ ಸಾಂಗತ್ಯ ನೀಡಿದ್ದು ಪ್ರವೀಣ್ ಡಿ.ರಾವ್ (ತಬಲಾ), ದೀಪಕ್ (ಸಾರಂಗಿ) ಹಾಗೂ ಪ್ರಕಾಶ್ ಪಿ.ಹೆಗ್ಡೆ (ಕೊಳಲು). ಎಲ್ಲಿಯೂ ತಾಳ ಹಾಗೂ ಲಯ ತಪ್ಪದಂತೆ ಒಪ್ಪವಾಗಿ ನೃತ್ಯ ಪ್ರದರ್ಶನ ಸಾಗುವಂತೆ ಈ ಸಾಥಿಗಳು ಸಾಥ್ ನೀಡಿದರು