ಮುದ ನೀಡಿದ "ಭವಾನಿ ವೈಭವ" ನೃತ್ಯ
ಸೂರ್ಯ ಬಾನಂಚಿನ ತೆರೆಯ ಮರೆಗೆ ಸರಿಯುವ ಆ ಹೊತ್ತಿನಲ್ಲಿ ಅಂಬೆಯ ಸನ್ನಿಧಿಯಲ್ಲಿ ಅಲಕೃತವಾದ ರಂಗದ ಪರದೆ ಸರಿಯಿತು. ಅಲ್ಲಿ ತೆರೆದುಕೊಂಡಿತು ದೇವಿಯ ಹತ್ತಾರು ರೂಪಗಳ ವೈಭವದ ಚಿತ್ತಾರ.
ಇಂಪಾದ ರಾಗದ ಜೊತೆಗೆ ತಾಳದ ಮೇಳ. ಗೆಜ್ಜೆ ಕಟ್ಟಿ ಹೆಜ್ಜೆ ಹಾಕುವ ಸುಂದರಾಂಗಿಯರ ಸುಂದರ ಮೊಗದಲ್ಲಿಯೂ ದೈವಕಳೆ. ಅವರೆಲ್ಲರೂ ರಂಗದ ಮೇಲೆ ಭಾವ-ಭಂಗಿಯಿಂದ ದೇವಿಯ ಪ್ರತಿರೂಪವಾಗಿ ನಿಂತರು. ಅದೆಷ್ಟೊಂದು ಹೊತ್ತು ಬಣ್ಣ-ಬೆಳಕಿನ ಆಟದ ನಡುವೆ ಭವಾನಿಯ ವೈಭವದ ರಸಾಮೃತ ಸಾರವೇ ಅಲ್ಲಿ ಹರಿಯಿತು. ಚಿತ್ತವನು ಅತ್ತಿತ್ತ ಕದಲಿಸದೇ; ಸ್ತಬ್ಧ ಚಿತ್ರಗಳಂತೆ ಕುಳಿತ ಪ್ರೇಕ್ಷಕರ ಕಂಗಳ ತುಂಬಾ ಭಕ್ತಿಯ ಹೊಳಪು ಅಪಾರ.
ಇಂತಹದೊಂದು ಭಕ್ತಿಯ ಸಾರವು ನೃತ್ಯ ಸಾಗರ ಮಂಥನದಿಂದ ಹೊರಹೊಮ್ಮಿತು. ಅದೇ `ಅಂಬಾ ಭವಾನಿ ವೈಭವ'ದ ಅಮೃತಧಾರೆ. ಈ ನೃತ್ಯಾಮೃತ ಧಾರೆಯನ್ನು ಹರಿಸಿದ್ದು `ಗರುಡ ನಾಟ್ಯ ಸಂಘ'ದ ಪ್ರತಿಭಾವಂತ ಯುವ ಕಲಾವಿದರು. ಕುಮಾರಸ್ವಾಮಿ ಬಡಾವಣೆಯಲ್ಲಿನ `ಶ್ರೀ ಅಂಬಾ ಭವಾನಿ ದೇವಸ್ಥಾನ'ದಲ್ಲಿ ನಡೆದ ದೇವಿ ವರ್ಣನೆಯ ನೃತ್ಯ ಕಾರ್ಯಕ್ರಮವು ಪ್ರೇಕ್ಷಕರಿಗೆ ಮುದ ನೀಡಿತು.
ಭರತ ನಾಟ್ಯ ಹಾಗೂ ಕಾಂಟೆಂಪರರಿ ನೃತ್ಯವನ್ನು ಮೇಳೈಸಿದ `ಕಾಂಟೆಂಪರರಿ ಕ್ಲಾಸಿಕಲ್' ಶೈಲಿಯಲ್ಲಿ ಪ್ರಸ್ತುತಪಡಿಸಿದ ಅಂಬಾ ಭವಾನಿ ವೈಭವ ನೃತ್ಯವು ಸುಮಾರು ಒಂದೂವರೆ ತಾಸು ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿತು. ಫ್ಯೂಜನ್ ಸಂಗೀತದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ನೃತ್ಯ ನೋಡುವುದು ಎಷ್ಟೊಂದು ಸೊಗಸು ಎನ್ನುವುದಿಲ್ಲಿ ಅನುಭವಕ್ಕೆ ಬಂತು.
ಪಾಶ್ಚಾತ್ಯ ಸಂಗೀತದ ಮಿಶ್ರಣವ್ದಿದರೂ ಸಂಪ್ರದಾಯದ ಚೌಕಟ್ಟಿನೊಳಗೆ ನಡೆದ ನೃತ್ಯ ಪ್ರದರ್ಶನಕ್ಕೆ ನಾಂದಿ ಹಾಡಿದ್ದೇ ಗಣೇಶನ ಸ್ತುತಿಯೊಂದಿಗೆ. ಗಿರಿಜಾ ಸುತನ ಸ್ಮರಣೆ ಮಾಡಿದ್ದು ಶೋಭಾ ಲೋಲನಾಥ್ ಹಾಗೂ ರಮ್ಯಾ ವೆಂಕಟೇಶ್. ಸುಮುಖನ ಸ್ತುತಿಯ ನಂತರ ಶಿವನ ತಾಂಡವ ಇರಲೇಬೇಕ್ಲಲವೇ!? ಅದನ್ನು ರಂಗದ ಮೇಲೆ ಪ್ರದರ್ಶಿಸಿದ್ದು ಪುಟ್ಟ ಕಲಾವಿದೆ ವರ್ಷಾ ವೆಂಕಟೇಶ್.
ಪಾರ್ವತಿ ಪತಿಯ ಪರಮ ಭಕ್ತನಾದ ನಂದಿಯ ರೂಪದಲ್ಲಿ ಕಾಣಿಸಿಕೊಂಡ ಗಿರೀಶ್ ಭಟ್ ಅಂತೂ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಗೆಜ್ಜೆಕಟ್ಟಿದ ಪಾದ ತಟ್ಟಿದ ರೀತಿ ಪ್ರೇಕ್ಷಕರ ಮುಖದಲ್ಲಿ ಮಂದಹಾಸದ ಅಂದದ ಹೂವು ಅರಳುವಂತೆ ಮಾಡಿದ್ದು ವಿಶೇಷ. ಅನಘಾ ಭಟ್, ಸಂಧ್ಯಾ ದಿನೇಶ್, ತಾರಾ ಲೋಲನಾಥ್, ಕಾರ್ತಿಕ್ ಗಿರೀಶ್ ಶರ್ಮ ಹಾಗೂ ನವೀನ್ ಕುಮಾರ್ ಕೂಡ ಭವಾನಿಯ ವೈಭವದ ಸೊಬಗಿಗೆ ಪ್ರಭಾವಳಿಯಾಗುವ ರೀತಿಯಲ್ಲಿ ಭವಾನಿ ವೈಭವ ನೃತ್ಯದಲ್ಲಿ ಒಂದಾದರು.