3.18.2010

ಬನ್ನೇರುಘಟ್ಟದಲ್ಲಿ ಚಿಂಕಾರಾ "ಮರಿ"



ಮೊದಲ ಬಾರಿಗೆ ಕರ್ನಾಟಕದ ವನ್ಯಜೀವಿ ಉದ್ಯಾನವೊಂದರಲ್ಲಿ "ಚಿಂಕಾರಾ" ಮರಿ ಹಾಕಿದೆ. ಇಂಥದೊಂದು ವಿಶೇಷ ಸಾಧ್ಯವಾಗಿದ್ದು ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ.

ಇಲ್ಲಿನ ವಾತಾವರಣದಲ್ಲಿ ಚಿಂಕಾರಾ ಗರ್ಭಧಾರಣೆ ಮಾಡಲು ಸಾಧ್ಯವೇ ಇಲ್ಲ, ಹಾಗೆ ಸಾಧ್ಯವಾದರೂ ಅದು ಮರಿ ಹಾಕುವ ಸಂಭವವೂ ಕಡಿಮೆ. ಮರಿ ಹುಟ್ಟಿದರೂ ಅದು ಇಲ್ಲಿನ ಪರಿಸರದಲ್ಲಿ ಬದುಕಿ ಉಳಿಯುವುದು ಕಷ್ಟ... ಎನ್ನುವ ಹಲವಾರು ಅಭಿಪ್ರಾಯಗಳನ್ನು ಚಾಲೆಂಜ್ ಆಗಿ ತೆಗೆದುಕೊಂಡ ಬನ್ನೇರುಘಟ್ಟ ಜೈವಿಕ ಉದ್ಯಾನದ ಸಹಾಯಕ ನಿರ್ದೇಶಕ (ವನ್ಯಜೀವಿ ವೈದ್ಯಕೀಯ ಸೇವೆ) ಡಾ.ಬಿ.ಸಿ.ಚಿಟ್ಟಿಯಪ್ಪ ಅವರು ಚಿಂಕಾರಾ ಗರ್ಭಧಾರಣೆಗಾಗಿ "ಕ್ರಾಸಿಂಗ್" ಮಾಡಿಸಿಯೇಬಿಟ್ಟರು.

ಅದರೊಂದಿಗೆ ಎಲ್ಲರ ಅನಿಸಿಕೆಗಳು ಸುಳ್ಳಾದವು. ರಾಜ್ಯದ ವನ್ಯಜೀವಿ ಉದ್ಯಾನವೊಂದರಲ್ಲಿ ಮೊಟ್ಟ ಮೊದಲ ಬಾರಿಗೆ ಚಿಂಕಾರಾ ಮರಿಯ ಜನನವಾಯಿತು. ಅಷ್ಟೇ ಅಲ್ಲ ಪುಟ್ಟ ಚಿಂಕಾರಾ ಮರಿಯು ಈಗ ಎದ್ದು ಓಡಾಡುತ್ತಿದೆ. ತಾಯಿಯ ಮೊಲೆಹಾಲು ಕೂಡ ಕುಡಿಯುತ್ತಿದೆ. "ಚಿಂಕಾರಾ ಸ್ವಸ್ಥವಾಗಿದೆ ಓಡಾಡುತ್ತಿದೆ ಇದನ್ನು ನಾವು ಕಣ್ಣಾರೆ ಕಂಡಿದ್ದೇವೆ, ಆನಂದಿಸಿದ್ದೇವೆ" ಎಂದು ಜಿ.ಎನ್.ಎಸ್. ಯಾಮಿನಿ ಫೌಂಡೇಷನ್ ಕಾರ್ಯದರ್ಶಿ ಶೋಭಾ ಎಂ. ಲೋಲನಾಥ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬನ್ನೇರುಘಟ್ಟದಲ್ಲಿ ಮಾತ್ರ ಚಿಂಕಾರಾ:

ಬನ್ನೇರುಘಟ್ಟ ಜೈವಿಕ ಉದ್ಯಾನದ ಹೊರತಾಗಿ ಕರ್ನಾಟಕದ ಯಾವುದೇ ವನ್ಯಜೀವಿ ಉದ್ಯಾನದಲ್ಲಿ ಚಿಂಕಾರಾ ಇಲ್ಲವೆನ್ನುವುದು ವಿಶೇಷ. ಇಲ್ಲಿ ಈ ಪ್ರಾಣಿಯನ್ನು ತಂದು ಸಲಹುವ ನಿಟ್ಟಿನಲ್ಲಿ ಸಹಾಯಕ ನಿರ್ದೇಶಕ (ವನ್ಯಜೀವಿ ವೈದ್ಯಕೀಯ ಸೇವೆ) ಡಾ.ಬಿ.ಸಿ.ಚಿಟ್ಟಿಯಪ್ಪ ಅವರು ಬಹಳಷ್ಟು ಆಸಕ್ತಿ ವಹಿಸಿದರು. ಅಷ್ಟೇ ಅಲ್ಲ ಇಲ್ಲಿಯೇ ಚಿಂಕಾರಾ ಮರಿ ಹಾಕುವಂತೆ ಮಾಡುವಲ್ಲಿಯೂ ಅವರ ವೈದ್ಯಕೀಯ ಪರಿಣತಿಯು ಪ್ರಯೋಜನಕ್ಕೆ ಬಂತು.

ಎಲ್ಲಕ್ಕಿಂತ ಮುಖ್ಯವಾಗಿ ಅದಕ್ಕೆ ಬೇಕಾದ ಸೂಕ್ತವಾದ ವಾತಾವರಣವನ್ನು ಕಲ್ಪಿಸಲು ಬನ್ನೇರುಘಟ್ಟ ಜೈವಿಕ ಉದ್ಯಾನದ ನಿರ್ದೇಶಕರಾದ ಮಿಲ್ಟ್ಯಾಗೊ ಅವರು ಬಹಳಷ್ಟು ಮುತುವರ್ಜಿ ವಹಿಸಿದರು. ಅದರ ಪರಿಣಾಮವಾಗಿ ಮೊಟ್ಟ ಮೊದಲ ಬಾರಿಗೆ ರಾಜ್ಯದ ವನ್ಯಜೀವಿ ಉದ್ಯಾನವನವೊಂದರಲ್ಲಿ ಚಿಂಕಾರಾ ಮರಿಯನ್ನು ನೋಡುವ ಅವಕಾಶವು ವನ್ಯಜೀವಿ ಪ್ರಿಯರಿಗೆ ಸಿಕ್ಕಿದೆ.

ಚಿಂಕಾರಾ ಅಂದರೇನು?:

ಚಿಂಕಾರಾ ಇದು "ಆಂಟೆಲೋಪ್" ಪ್ರಜಾತಿಗೆ ಸೇರಿದ್ದು ಇದನ್ನು "ಜೆನಸ್ ಗ್ಯಾಜೆಲ್ಲಾ" ಗುಂಪಿಗೆ ಸೇರಿದ ಜೀವಿಗಳ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಆದ್ದರಿಂದಲೇ "ಚಿಂಕಾರಾ"ವನ್ನು "ಗ್ಯಾಜೆಲ್ಲಾ ಬೆನ್ನೆಟ್ಟೀ" ಎಂದು ಕೂಡ ಗುರುತಿಸಲಾಗುತ್ತದೆ. ಇದು ದಕ್ಷಿಣ ಏಷ್ಯಾ ಭಾಗದಲ್ಲಿ ಕಂಡುಬರುವ ಅಳಿವಿನ ಅಂಚಿನಲ್ಲಿರುವ ವನ್ಯಜೀವಿಗಳಲ್ಲಿ ಒಂದಾಗಿದೆ.

ಭಾರತ, ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಇರಾನ್ ದೇಶದ ಕೆಲವು ಭಾಗದಲ್ಲಿಯೂ ಇದರ ಸಂಖ್ಯೆ ಕ್ಷೀಣಿಸುತ್ತಾ ಬರುತ್ತಿದೆ ಎನ್ನುವುದು ಅಂತರರಾಷ್ಟ್ರೀಯ ಪ್ರಕೃತಿ ಮತ್ತು ಪ್ರಕೃತಿ ಸಂಪನ್ಮೂಲ ಸಂರಕ್ಷಣಾ ಒಕ್ಕೂಟ (ಐ.ಯು.ಸಿ.ಎನ್) ಆತಂಕ. "ಇಂಡಿಯನ್ ಗ್ಯಾಜೆಲ್ಲಾ" ಎಂದು ಕೂಡ ಕರೆಯಲಾಗುವ ಚಿಂಕಾರಾ ಎತ್ತರ ಸಾಮಾನ್ಯವಾಗಿ 64 ಸೆಂಟಿ ಮೀಟರ್. ತೂಕ 35 ಕಿಲೋ ಗ್ರಾಂ ಆಗಿರುತ್ತದೆ.

ಮುಖದ ಮೇಲಿನ ಪಟ್ಟಿಗಳು ಚಿಂಕಾರಾ ಪ್ರಮುಖ ಆಕರ್ಷಣೆ. ಇದರ ಕಪ್ಪು ವರ್ಣದ ಕೊಂಬುಗಳು ಗರಿಷ್ಠ 39 ಸೆಂಟಿ ಮೀಟರ್ ವರೆಗೂ ಬೆಳೆಯುತ್ತವೆ. ಬಹಳ ನಾಚಿಕೆ ಸ್ವಭಾವದ ಈ ವನ್ಯಜೀವಿಯು ಸದಾ ಪ್ರಶಾಂತವಾದ ಪ್ರದೇಶದಲ್ಲಿ ಇರಲು ಬಯಸುತ್ತದೆ. ವಿಶೇಷವೆಂದರೆ ದೀರ್ಘ ಕಾಲದವರೆಗೆ ನೀರು ಕುಡಿಯದಿದ್ದರೂ ಇದಕ್ಕೆ ತೊಂದರೆ ಆಗದು. ಅದು ತಾನು ಸೇವಿಸುವ ಸಸ್ಯಗಳಲ್ಲಿನ ತೇವದಿಂದಲೇ ತನ್ನ ದೇಹಕ್ಕೆ ಅಗತ್ಯವಾದ ಜಲವನ್ನು ಪೂರೈಸಿಕೊಳ್ಳುತ್ತದೆ ಎನ್ನುವುದೂ ವಿಶಿಷ್ಟ.

ಗುಂಪಿನಲ್ಲಿ ಬದುಕುವ ಪ್ರಾಣಿಯಲ್ಲ ಚಿಂಕಾರಾ. ಕೆಲವೊಮ್ಮೆ ಗುಂಪಾಗಿ ಇದ್ದರೂ, ಸಂಖ್ಯೆಯು ನಾಲ್ಕು ಹಾಗೂ ಐದಕ್ಕಿಂತ ಹೆಚ್ಚಿರುವುದು ವಿರಳ. ಈ ರೀತಿಯ ವನ್ಯಜೀವಿ ಸಮಾಜದ ಜೀವನವೇ ಅದಕ್ಕೆ ಅಪಾಯಕಾರಿಯೂ ಹೌದು. ಸುಲಭವಾಗಿ ಬೇಟೆಗೆ ಬಲಿಯಾಗುತ್ತದೆ. ಚಿರತೆಗಳಿಗೆ ಪ್ರಿಯವಾದ ಆಹಾರವಾಗಿದೆ ಚಿಂಕಾರಾ.

ಚಿಂಕಾರಾವನ್ನು ಮನುಷ್ಯರು ಆಟಕ್ಕಾಗಿ ಕೊಲ್ಲುವುದು ಹೆಚ್ಚಾಗಿದ್ದರಿಂದ ಇವುಗಳ ಸಂಖ್ಯೆ ಕಡಿಮೆ ಆಗುತ್ತಿದೆ ಎನ್ನುವುದು ಆತಂಕ. ಆದ್ದರಿಂದ ಇವುಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವ ರಾಜಸ್ತಾನದಲ್ಲಿ ಚಿಂಕಾರಾ ರಕ್ಷಣೆಗಾಗಿ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗಿದೆ. ಆದರೂ ಬೇಟೆಗಾರರಿಗೆ ಚಿಂಕಾರಾ ಪ್ರಿಯವಾಗಿವೆ. ಇದಕ್ಕೆ ಕಾರಣ ಇವು ಗುಂಪುಗಳಲ್ಲಿ ಇರುವುದಿಲ್ಲ ಎನ್ನುವುದು.