10.27.2009

INTEREST IN INDIAN DANCE


ಭಾರತೀಯ ನೃತ್ಯ; ವಿದೇಶಿ ಯುವತಿಯ ಆಸಕ್ತಿ

ದಕ್ಷಿಣ ಅಮೆರಿಕಾದಲ್ಲಿ ಹಲವಾರು ನೃತ್ಯ ಪ್ರದರ್ಶನ ನೀಡಿದ ಬೆಳ್ಳನೆ ಬೆಳ್ಳಿಯ ಬೆಡಗಿಗೆ ಅದೇನೋ ಭಾರತೀಯ ನೃತ್ಯಗಳ ಕಡೆಗೆ ಭಾರಿ ಸೆಳೆತ. ಆ ಆಕರ್ಷಣೆಯೇ ಅವಳು ಸಾವಿರಾರು ಮೈಲಿ ಸಾಗರವನ್ನು ದಾಟಿ ಇಲ್ಲಿಗೆ ಬಂದಳು. ಹೆಸರು ಜೆಸ್ಸಿಕಾ; ಉದ್ಯಾನಗರಿಗೆ ಬಂದ ನಂತರ ಮೊದಲು ಆರಂಭಿಸಿದ್ದು ಯೋಗಾಭ್ಯಾಸ. ಜೊತೆಗೆ ನಡೆಯಿತು ನೃತ್ಯ ಶಾಲೆಯ ಶೋಧ. `ಡೆಕ್ಕೆನ್ ಹೆರಾಲ್ಡ್' ಪತ್ರಿಕೆ ಎತ್ತಿಕೊಂಡು ಕಾರ್ಯಕ್ರಮ ಪಟ್ಟಿ ನೋಡಿ, ಕೆಲವು ನೃತ್ಯ ಪ್ರದರ್ಶನ ನೋಡಲು ಕೂಡ ಹೋದಳು. ಯಾವುದು ತನ್ನ ನೃತ್ಯ ಶೈಲಿಗೆ ಪೂರಕವಾಗುತ್ತದೆ ಎನ್ನುವ ಸಂಶೋಧನೆಯೂ ನಡೆಯಿತು. ಆಗ ಸೂಕ್ತವಾಗಿ ಕಂಡಿದ್ದು ಭಾರತದ ಎಲ್ಲ ನೃತ್ಯ ಪ್ರಕಾರಗಳ ಬೆರೆಸಿದ ಕಾಂಟೆಂಪರರಿ ಕ್ಲಾಸಿಕ್ ನೃತ್ಯ.

ಭರತನಾಟ್ಯ, ಕಥಕ್, ಕೂಚಪುಡಿ, ಮಣಿಪುರಿ, ಯಕ್ಷಗಾನ, ಅಟ್ಟಕಳರಿ...ಹೀಗೆ ಹತ್ತು ಹಲವು ಭಾರತೀಯ ನೃತ್ಯ ಶೈಲಿಯನ್ನು ಮೇಳೈಸಿಕೊಂಡ ಕಾಂಟೆಂಪರರಿ ಕ್ಲಾಸಿಕಲ್ ಇಷ್ಟವಾಯಿತು. ಆಗ ಜೆಸ್ಸಿಕಾ ಬಂದು ನಿಂತಿದ್ದು ಇಂತಹದೇ ಒಂದು ನೃತ್ಯ ಪ್ರಕಾರಕ್ಕೆ ಒಗ್ಗಿಕೊಂಡಿರುವ ತಂಡವನ್ನು ಕಟ್ಟಿಕೊಂಡು ಪ್ರದರ್ಶನ ನೀಡುತ್ತಿರುವ ನಟಿಯೂ ಆಗಿರುವ ನೃತ್ಯಗಾರ್ತಿ ಶೋಭಾ ಲೋಲನಾಥ್ ಅವರ ಮುಂದೆ. ಭಾರತದ ತಮ್ಮ ವೀಸಾ ಅವಧಿ ಮುಗಿಯುವಷ್ಟರಲ್ಲಿ ನೃತ್ಯ ಪಾಠ ಕಲಿಯುವ ಉತ್ಸಾಹದಿಂದ ಗಮನವಿಟ್ಟು ಪಾಠ ಕಲಿತಳು ಜೆಸ್ಸಿಕಾ.

ತಮ್ಮ ನಾಡಿನಲ್ಲಿ ನೃತ್ಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಜೆಸ್ಸಿಕಾಗೆ ಬೆಂಗಳೂರಿನ ಕಲಾ ಕ್ಷೇತ್ರದಲ್ಲಿ ಸಾಕಷ್ಟು ಅಚ್ಚರಿಗಳು ಕಾಣಿಸಿದವು. ಮೊದಲನೆಯದಾಗಿ ಇಲ್ಲಿ ನೃತ್ಯ ಪ್ರದರ್ಶನಗಳಿಗೆ ಉಚಿತ ಪ್ರವೇಶ ಎನ್ನುವುದು. `ಅಲ್ಲಿ; ನಮ್ಮ ದೇಶದಲ್ಲಿ ಯಾವುದೂ ಉಚಿತವಿಲ್ಲ. ಕಲೆಯೂ ಅಷ್ಟೇ. ನೋಡಬೇಕೆಂದರೆ ಹಣ ಕೊಡಬೇಕು. ಪ್ರವೇಶ ಶುಲ್ಕ ಭಹಳ ಅಧಿಕ. ನಾನು ಇಲ್ಲಿ ಮೊದಲ ಬಾರಿಗೆ ನೃತ್ಯ ಪ್ರದರ್ಶನ ನೋಡಲು ಹೋದಾಗ, ಟಿಕೆಟ್ ಕೌಂಟರ್ ಎಲ್ಲಿ ಎಂದು ಹುಡುಕಾಡಿದೆ. ಆಗ ಒಬ್ಬರು ಉಚಿತ ಪ್ರವೇಶ ಎಂದರು. ಭಾರಿ ಅಚ್ಚರಿ ಆಯಿತು. ಅದೊಂದು ಅದ್ಭುತ ನೃತ್ಯ ಪ್ರದರ್ಶನವಾಗಿತ್ತು. ಆದರೂ ಒಂದು ಡಾಲರ್ ಕೂಡ ವ್ಯಯ ಮಾಡದೆ ನೋಡಿದೆ' ಎಂದು ಇಷ್ಟಗಲ ಕಣ್ಣರಳಿಸಿದಳು ಜೆಸ್ಸಿಕಾ.

ಮಾತೃ ಭಾಷೆ ಸ್ಪ್ಯಾನಿಷ್ ಆದ್ದರಿಂದ ಜೆಸ್ಸಿಕಾಗೆ ಇಂಗ್ಲಿಷ್ ಮಾತನಾಡುವುದು ಹಾಗೂ ಅರ್ಥ ಮಾಡಿಕೊಳ್ಳುವುದು ಕಷ್ಟ. ಹಾಗೆಂದು ಮುಜುಗರ ಪಟ್ಟುಕೊಳ್ಳದೇ `ನನಗೆ ಇಂಗ್ಲಿಷ್ ಕಷ್ಟ; ಸ್ವಲ್ಪ ನಿಧಾನವಾಗಿ ಮಾತನಾಡಿ' ಎಂದು ನಿರ್ಭಿಡೆಯಾಗಿ ಹೇಳುತ್ತಾಳೆ.

`ನಾನು ಇಲ್ಲಿಗೆ ಬಂದ್ದಿದು ನೃತ್ಯ ಹಾಗೂ ಯೋಗ ಕಲಿಯುವುದಕ್ಕೆ. ಮೊದಲು ಕೋಲ್ಕತ್ತಕ್ಕೆ ಹೋಗಿದ್ದೆ; ಅಲ್ಲಿನ ಜನರು ಇಷ್ಟವಾಗಲಿಲ್ಲ. ಆದ್ದರಿಂದ ಬೆಂಗಳೂರಿಗೆ ಬಂದೆ. ಈ ನಗರದಲ್ಲಿನ ಜನ ತುಂಬಾ ಒಳ್ಳೆಯವರು' ಎಂದು ಒಂದೊಂದೇ ಇಂಗ್ಲಿಷ್ ಪದವನ್ನು ಜೋಡಿಸಿದ ಜೆಸ್ಸಿಕಾ `ನನ್ನ ಮಟ್ಟಿಗೆ ಇದು ಶಿಕ್ಷಣ ಪ್ರವಾಸ. ಬೆಳಿಗ್ಗೆಯಿಂದ ಸಂಜೆಯವರೆಗಿನ ಕಾರ್ಯಕ್ರಮದ ಟಾಯಮ್ ಟೇಬಲ್ ಇದೆ. ಆರು ಗಂಟೆಗೆ ಯೋಗ, ಆನಂತರ ಡಾನ್ಸ್ ಕ್ಲಾಸ್, ಅಲ್ಲಿ ಕಲಿತದ್ದನ್ನು ನನ್ನ ಕೋಣೆಗೆ ಹಿಂದಿರುಗಿ ಅಭ್ಯಾಸ ಮಾಡುವುದು. ಮಧ್ಯಾಹ್ನ "ಡೆಕ್ಕನ್ ಹೆರಾಲ್ಡ್" ಪತ್ರಿಕೆ ತೆಗೆದುಕೊಂಡು ನೃತ್ಯ ಕಾರ್ಯಕ್ರಮಗಳ ಪಟ್ಟಿ ನೋಡಿ, ಸಂಜೆ ನೃತ್ಯ ಸೊಬಗು ಆಸ್ವಾಧಿಸುವುದು. ಇಷ್ಟು ನನ್ನ ದಿನಚರಿ' ಎಂದು ಚೆಂದದ ಮಂದಹಾಸ ಚೆಲ್ಲುತ್ತಾಳೆ.

ಏನು ಇಷ್ಟವೆಂದು ಕೇಳಿದರೆ `ಇಲ್ಲಿನ ಸಂಪ್ರದಾಯಗಳು. ಪೂಜೆ ಮಾಡುವುದು, ಊದುಬತ್ತಿ ಹಾಗೂ ದೀಪ ಬೆಳಗುವುದನ್ನು ನಾನೂ ಮಾಡುತ್ತೇನೆ. ಒಂಥರಾ ಸಂತಸ ಸಿಗುತ್ತದೆ. ಡಾನ್ಸ್ ಕ್ಲಾಸ್ನಲ್ಲಿ ನಟರಾಜನ ಪೂಜೆ ಮಾಡಿದ್ದು, ನೆಲಕ್ಕೆ ಮೊಣಕಾಲೂರಿ ನಮಸ್ಕರಿಸಿದ್ದು... ಎಲ್ಲವೂ ನನ್ನ ನೆನಪಿನಲ್ಲಿ ಸದಾ ಇರುತ್ತದೆ. ಇದೇ ಸಂಪ್ರದಾಯವೇ ನಿಜವಾದ ಭಾರತ ಅಲ್ಲವೇ?' ಎಂದು ಕೇಳಿ, ತಣ್ಣಗೆ ನೋಡುತ್ತಾಳೆ.

ಜೆಸ್ಸಿಕಾ ತಾನು ಇಲ್ಲಿ ಕಲಿತ ವಿದ್ಯೆಯನ್ನು ತಮ್ಮ ದೇಶದಲ್ಲಿ ಬೇರೆಯವರಿಗೂ ಕಲಿಸಿಕೊಡುವ ಯೋಚನೆ. ಜೆಸ್ಸಿಕಾ ಹೇಳುವ ಪ್ರಕಾರ ವಿದೇಶದಲ್ಲಿ ಅತ್ಯಧಿಕವಾಗಿ ಸೇಲ್ ಆಗುವ ಭಾರತದ ಪ್ರೊಡಕ್ಟ್ ಯಾವುದೆಂದರೆ; ಅದು `ಯೋಗ' ಹಾಗೂ `ಮಸಾಲೆ' ಮಾತ್ರ!

ಲೇಖನ ಕೃಪೆ: "ಪ್ರಜಾವಾಣಿ" ಕನ್ನಡ ದಿನಪತ್ರಿಕೆ