7.07.2009

SHOBHA IN "MANGALYA" KANNADA SERIAL


ಮೇಕಪ್ ಇಲ್ಲದ

"ಮಾಂಗಲ್ಯ"ವೀಗ ಶೋಭಾಯಮಾನ


"ಜೀವಕಿಂತ ಮಿಗಿಲು... ಮಾಂಗಲ್ಯ..." ಈ ಹಾಡಿನ ಸಾಲು ಕನ್ನಡಿಗರ ಅದೆಷ್ಟೋ ಮನೆಗಳಲ್ಲಿ ವಾರದ ಐದು ದಿನವೂ ಕೇಳಿಸುತ್ತದೆ. ರಾತ್ರಿ ಒಂಬತ್ತೂವರೆಯಾದರೆ ಸಾಕು; ಟೆಲಿವಿಷನ್ ಸ್ವಿಚ್ ಹಾಕು "ಮಾಂಗಲ್ಯ" ಬರುತ್ತದೆಂದು ಹೇಳುವವರೂ ಹೆಚ್ಚು. ಸಾವಿರದ ಗಡಿಯನ್ನು ದಾಟಿದ್ದರೂ, ವೀಕ್ಷಕರ ನಾಡಿಯನ್ನು ಸರಿಯಾಗಿ ಹಿಡಿದುಕೊಂಡು ಸಾಗಿರುವ ಈ ಮಾಂಗಲ್ಯ ಧಾರಾವಾಹಿ ಕಥೆಯ ಬಗ್ಗೆ ಹರಟುವ ವನಿತೆಯರ ಸಂಖ್ಯೆಯೇನು ಕಡಿಮೆಯಿಲ್ಲ!


ಆದರೆ ಈ ಧಾರಾವಾಹಿ ಇನ್ನೂ ಒಂದು ಕಾರಣಕ್ಕೆ ವಿಶಿಷ್ಟವಾದ್ದು. ಇದು ಮೇಕಪ್ ಇಲ್ಲದ ಸೀರಿಯಲ್. ಅಂದರೆ; ಇದರಲ್ಲಿನ ಯಾವುದೇ ಪಾತ್ರಕ್ಕೂ ಮೇಕಪ್ ಇಲ್ಲ. ಮಹಿಳೆಯರ ಪಾತ್ರಗಳಿಗೂ ಇದೇ ನಿಯಮ. ಲಿಪ್ಸ್ಟಿಕ್ ಹಚ್ಚಿಕೊಂಡರೆ ಅದೇ ಹೆಚ್ಚು. ಆದರೂ ಮೇಕಪ್ ಇಲ್ಲದ ಈ ಧಾರಾವಾಹಿಯೇ ಕನ್ನಡದ ಟೆಲಿವಿಷನ್ ವೀಕ್ಷಕರಿಗೆ ಅಚ್ಚುಮೆಚ್ಚು.


ಸುದೀರ್ಘವಾಗಿ ಸಾಗಿರುವ "ಮಾಂಗಲ್ಯ"ದ ಪ್ರವಾಹದಲ್ಲಿ ಒಂದಾಗಿ ವಾರದೈದು ದಿನ ಅರ್ಧ ಗಂಟೆ ಕಳೆಯುವುದು ದಿನಚರಿಯ ಒಂದು ಭಾಗ ಎನ್ನುವಂತಾಗಿದೆ. ಮನೆಯ ಹೆಣ್ಣುಮಕ್ಕಳು ನೋಡುತ್ತಾರೆಂದು ಅನಿವಾರ್ಯವಾಗಿಯಾದರೂ ನೋಡುವ ಗಂಡಸರು ಕೂಡ ನಿಧಾನವಾಗಿ ಇದರ ಸೆಳವಿನಲ್ಲಿ ಸಿಕ್ಕಿಕೊಂಡಿದ್ದು ಅಚ್ಚರಿಯೇನಲ್ಲ.


ತಮ್ಮ ಮನೆಯ ಕಥೆ ಎನ್ನುವಂತೆ ಸಾಗುವ "ಮಾಂಗಲ್ಯ"ದಲ್ಲಿ ಬೇರೆ ಧಾರಾವಾಹಿಗಳ ಆಡಂಬರವಿಲ್ಲ. ಕ್ಯಾಮೆರಾ ಮೂಮೆಂಟ್ ಮೋಡಿಯಿಲ್ಲ. ಇರುವುದೆಲ್ಲವೂ ಕಥೆ ಹಾಗೂ ಪಾತ್ರಗಳ ಬಲದ ಸೆಳೆತ. ಅದೇ ಇಷ್ಟೊಂದು ಕಾಲ ಟೆಲಿವಿಷನ್ ವೀಕ್ಷಕರನ್ನು ತನ್ನ ಬಿಗಿಯಾದ ಬಂಧದಲ್ಲಿ ಹಿಡಿದಿಟ್ಟಿದೆ. "ಉದಯ ಟಿವಿ" ವಾಹಿನಿಯಲ್ಲಿ ವರ್ಷಗಳಿಂದ ಮೂಡಿ ಬರುತ್ತಿರುವ "ಮಾಂಗಲ್ಯ"ವು ಕನ್ನಡದ ಜನಪ್ರಿಯ ಧಾರಾವಾಹಿಗಳ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ನಿಂತಿದೆ.


ಕೆಳ ಮಧ್ಯಮ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಹತ್ತಿರವಾಗುವಂತಹ ಕಥೆ ಹಾಗೂ ಸರಳವಾದ ನಿರೂಪಣೆಯಿಂದ ಜನಮೆಚ್ಚುಗೆ ಗಳಿಸಿರುವ ಮೇಕಪ್ ಇಲ್ಲದ ಸೀರಿಯಲ್ "ಮಾಂಗಲ್ಯ" ಈಗ ಹೊಸ ತಿರುವು ಪಡೆದುಕೊಂಡಿದೆ. ಮಾಂಗಲ್ಯದ ಸೆಳವಿಗೆ "ಪೂಜಾ" (ಶೋಭಾ ಲೋಲನಾಥ್) ಎನ್ನುವ ಹೊಸ ಪಾತ್ರವೊಂದರ ಪ್ರವಾಹವೂ ಹೊಸದಾಗಿ ಸೇರಿಕೊಂಡಿದೆ.


"ಸಿನಿ ಟೈಮ್ಸ್" ನಿಮರ್ಾಣದ ಹಾಗೂ ಸಿದ್ದಿಕ್ ಅವರು ನಿಮರ್ಾಪಕರಾಗಿರುವ "ಮಾಂಗಲ್ಯ"ವನ್ನು ನಿದರ್ೇಶಕ ಪಿ.ಸೆಲ್ವಂ ಅವರು ಇನ್ನಷ್ಟು ಬಲವುಳ್ಳ ಕಥೆಯಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ವೀಕ್ಷಕರಲ್ಲಿ ಆಸಕ್ತಿ ಕೆರಳಿಸಲು ಹಾಗೂ ಇನ್ನಷ್ಟು ಬಿಗಿಯಾಗಿ ಹಿಡಿದಿಡಲು ಅಗತ್ಯವಾದ ಹೂರಣವನ್ನು ತುಂಬತೊಡಗಿದ್ದಾರೆ. ಈ ಪ್ರಯತ್ನದ ಫಲವಾಗಿಯೇ "ಪೂಜಾ" ಎನ್ನುವ ಹೊಸ ಪಾತ್ರದ ಎಂಟ್ರಿಯಾಗಿದೆ.


ಮೆಕಪ್ ಇಲ್ಲದಿದ್ದರೂ ಆಕರ್ಷಕವಾಗಿ ಕಾಣಿಸುವ ಶೋಭಾ ಲೋಲನಾಥ್ ಅವರು "ಪೂಜಾ" ಪಾತ್ರಕ್ಕೆ ತಕ್ಕ ಭಾವ-ಭಂಗಿಯೊಂದಿಗೆ ವೀಕ್ಷಕರ ಕಣ್ಮನ ಸೆಳೆಯತೊಡಗಿದ್ದಾರೆ. ಕ್ಯಾಮೆರಾಮೆನ್ ಆರ್.ಕೆ.ವೆಂಕಿ ಅವರ ಸರಳ-ಸುಂದರ ಎನ್ನುವ ಛಾಯಾಗ್ರಹಣವು "ಪೂಜಾ" ಕ್ಯಾರೆಕ್ಟರಿನ "ಮಾಂಗಲ್ಯ" ಪ್ರವೇಶವನ್ನು ರೋಚಕಗೊಳಿಸಿದೆ. ಎಪಿಸೋಡ್ ನಿದರ್ೇಶಕ ಕಡಲ್ ಕೂಡ ಈ ಪಾತ್ರವನ್ನು ಪ್ರಭಾವಿಯಾಗಿಸುವಲ್ಲಿ ಶ್ರಮಿಸಿದ್ದಾರೆ.


ಈಗಾಗಲೇ ಮುರಳೀಧರ, ಮೈಕೊ ಶಿವು, ಸುಕುಮಾರ್, ಹರ್ಷ, ಅನಂತವೇಲು, ನಾಗೇಶ್ ಮಯ್ಯ, ವಾಣಿಶ್ರೀ, ಗೀತಾ ಸೂರ್ಯವಂಶಿ, ಸೌಮ್ಯ, ಸುಚಿತ್ರಾ ಅವರಂತಹ ಹಲವಾರು ಕಲಾವಿದರ ಪ್ರಭೆಯಿಂದ ಕಂಗೊಳಿಸಿರುವ "ಮಾಂಗಲ್ಯ" ಇನ್ನಷ್ಟು ಶೋಭಾಯಮಾನವಾಗಿದೆ!